ವಿಶೇಷ ಅಭಿವೃದ್ಧಿ ಯೋಜನೆ 2017-18

ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಶಿಷ್ಯವೇತನ:

ರಾಜ್ಯದ  ಹಿಂದುಳಿದ ತಾಲ್ಲೂಕುಗಳಲ್ಲಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲ ಉದ್ದೇಶದಿಂದ, ಪದವಿಯಲ್ಲಿ ಮೂಲ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ಒಟ್ಟು 870 (ಗುಲ್ಬರ್ಗಾ-261; ಬೆಳಗಾವಿ-174; ಬೆಂಗಳೂರು-261; ಮೈಸೂರು-174) ಶಿಷ್ಯವೇತನಗಳನ್ನು 2017-18ನೇ ಸಾಲಿನಲ್ಲಿ ನೀಡಲಾಗುತ್ತಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಾದೇಶಿಕ ಸಮ್ಮೇಳನ:

ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯಗೊಳಿಸುವ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಸಂಶೋಧನೆಗಳು ಮತ್ತು ಆವಿಷ್ಕಾರಗಳ ಬಗ್ಗೆ ಶಿಕ್ಷಕರಿಗೆ, ಕಾಲೇಜು ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಕಲುಬುರಗಿ ವಿಭಾಗದ ಕೊಪ್ಪಳ ಮತ್ತು ಕಲುಬುರಗಿ ಜಿಲ್ಲಾ ಕೇಂದ್ರದಲ್ಲಿ ಸಮ್ಮೇಳನವನ್ನು ಪ್ರಸ್ತುತ ಸಾಲನಲ್ಲಿ ಆಯೋಜಿಸಲಾಗುತ್ತಿದೆ.

ಯುವಕರಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸುಸ್ಥಿರ ಒಣಬೇಸಾಯ ಕಾರ್ಯಕ್ರಮ:

ಮಳೆ ಆಧಾರಿತ ಪ್ರದೇಶಗಳಲ್ಲಿನ ಅಕ್ಷರಸ್ಥ ಯುವಕರನ್ನು ಸಂಘಟಿಸಿವುದರ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಸುಸ್ಥಿರ ಸುಸ್ಥಿರ ಒಣ ಬೇಸಾಯಕ್ಕಾಗಿ ಪರ್ಯಾಯ ಪದ್ಧತಿಗಳ ಸಂಯೋಜನೆ ಮತ್ತು ಸೂಕ್ತ ಬೆಳೆ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳಲು ಮಾರ್ಗದರ್ಶನ ಮತ್ತು ತರಬೇತಿ ನೀಡಿ, ಬೀಜೋತ್ಪಾದನೆ/ಸಂಸ್ಕರಣೆ/ಹಂಚಿಕೆ ಹಾಗೂ ಮಾರುಕಟ್ಟೆ ಬಗ್ಗೆ ತಿಳುವಳಿಕೆ ನೀಡಲು ನವೀನ ಪದ್ಧತಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಎ.ಎಂ.ಇ ಪ್ರತಿಷ್ಠಾನದ ಸಹಯೋಗದೊಂದಿಗೆ ಸದರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 

ಪ್ರೌಢಶಾಲೆಗಳಿಗೆ ವಿಜ್ಞಾನ ಪ್ರಯೋಗ ಪರಿಕರ ವಿತರಣೆ:

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಕಲುಬುರಗಿ, ಬೆಂಗಳೂರು ಹಾಗೂ ಬೆಳಗಾವಿ ವಿಭಾಗಗಳಲ್ಲಿರುವ ಆಯ್ದ ಹಿಂದುಳಿದ ತಾಲ್ಲೂಕುಗಳ ಪ್ರೌಢಶಾಲೆಗಳಿಗೆ ವಿಜ್ಞಾನ ಪ್ರಯೋಗ ಪರಿಕರಗಳನ್ನು ಪ್ರಸ್ತುತ ಸಾಲಿನಲ್ಲಿ ವಿತರಿಸಲಾಗುತ್ತಿದೆ.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆ ಮತ್ತು ಉನ್ನತೀಕರಣ:

ವಿಶೇಷ ಅಭಿವೃದ್ಧಿ ಯೋಜನೆಯಡಿ ರಾಯಚೂರು, ಕೊಪ್ಪಳ, ಹಾವೇರಿ, ವಿಜಯಪುರ, ಚಿಕ್ಕಬಳ್ಳಾಪುರ (ಗೌರಿಬಿದನೂರಿನ ಹೊಸೂರು), ಯಾದಗಿರಿ ಮತ್ತು ಚಾಮರಾಜನಗರ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆ/ಉನ್ನತೀಕರಣಕ್ಕೆ ಅನುದಾನ ಒದಗಿಸಲಾಗುತ್ತಿದೆ.

ವಿಜ್ಞಾನ ಸಂಪನ್ಮೂಲ ಕೇಂದ್ರಗಳ ನಿರ್ವಹಣೆ ಮತ್ತು ಉನ್ನತೀಕರಣ:

ಬೆಂಗಳೂರು ವಿಭಾಗದ ಕನಕಪುರ, ಪಾವಗಡ ಮತ್ತು ಹೊಸದುರ್ಗದಲ್ಲಿ ಹಾಗೂ ಮೈಸೂರು ವಿಭಾಗದ ಮಳವಳ್ಳಿ (ಹುಸ್ಕೂರು), ಕಡೂರು (ಸೋಮನಹಳ್ಳಿ) ಮತ್ತು ಕೊಳ್ಳೇಗಾಲ (ರಾಮಾಪುರ)ದ ತಲಾ ಒಂದು ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಈ ಆರು ವಿಜ್ಞಾನ ಸಂಪನ್ಮೂಲ ಕೇಂದ್ರಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ ಅನುದಾನವನ್ನು ನೀಡಲಾಗುತ್ತಿದೆ. ಅಲ್ಲದೇ, ತುಮಕೂರಿನ ಗುಬ್ಬಿಯ ಒಂದು ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗುತ್ತಿದೆ.  

ವಿಜ್ಞಾನ ವಾಹಿನಿ ಕಾರ್ಯಕ್ರಮ:

ಮೈಸೂರಿನ ಹೆಚ್.ಡಿ. ಕೋಟೆಯ ಸರಗೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‍ನ ಸಹಯೋಗದೊಂದಿಗೆ  ವಿಜ್ಞಾನ ವಾಹಿನಿ ಕಾರ್ಯಕ್ರಮವನ್ನು ಹಲವಾರು ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ 2013-14ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ವಿಜ್ಞಾನದಲ್ಲಿ ಪ್ರಯೋಗಗಳನ್ನು ಹಾಗೂ ಸಂಶೋಧನೆಗಳನ್ನು ಕೈಗೊಳ್ಳಲು ‘ಸೆಂಟರ್ ಆಫ್ ಇನೋವೇಶನ್’ ಸ್ಥಾಪಿಸಲಾಗಿದ್ದು, ಈ ಸಂಶೋಧನಾ ಕೇಂದ್ರವು ವಿಜ್ಞಾನ ಪ್ರಯೋಗಾಲಯ, ಸೈನ್ಸ್ ಎಕ್ಸ್‍ಪ್ಲೊರೇಟರಿ ಪಾರ್ಕ್, ಗ್ರಂಥಾಲಯ ಹಾಗೂ ತರಬೇತಿಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಒದಗಿಸುತ್ತದೆ. ಪ್ರಸ್ತುತ ಸಾಲಿನಲ್ಲಿ ಈ ಸೌಲಭ್ಯಗಳ ನಿರ್ವಹಣೆಗೆ ಮತ್ತು ವಿವಿಧ ವೈಜ್ಞಾನಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುದಾನ ನೀಡಲಾಗಿದೆ.​