ವಿಜ್ಞಾನ ಗ್ಯಾಲರಿ

ಐರ್ಲೆಂಡ್ ದೇಶದ ಡಬ್ಲಿನ್ ನಗರದ ಟ್ರೀನಿಟಿ ಕಾಲೇಜಿನಲ್ಲಿ 2008 ರಲ್ಲಿ ಪ್ರಾರಂಭಿಸಿರುವ ವಿಜ್ಞಾನ ಗ್ಯಾಲರಿಯು ವಿಜ್ಞಾನ ಮತ್ತು ಆವಿಷ್ಕಾರದ ಜಗತ್ತಿನಲ್ಲಿ ಯುವಕರನ್ನು ತೊಡಗಿಸಿಕೊಳ್ಳಲು ವಿನೂತನ ಮಾದರಿಯ ಅವಕಾಶಗಳನ್ನು ಒದಗಿಸುತ್ತಾ ಬಂದಿದೆ. ಮುಂದುವರಿದು, ನಿರಂತರವಾಗಿ ಬದಲಾಗುತ್ತಿರುವ ಕಾರ್ಯಕ್ರಮಗಳು, ಪ್ರದರ್ಶನಗಳು ಹಾಗೂ ವಿಜ್ಞಾನ, ತಂತ್ರಜ್ಞಾನ ಮತ್ತು ಕಲೆಯನ್ನು ಸೇರಿಸುವ ಅನುಭವವನ್ನು ನೀಡುವ ವಿಜ್ಞಾನ ಗ್ಯಾಲರಿಗಳ ಜಾಲವು ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆಯುತ್ತಿದೆ. 

ಇದನ್ನು ಪರಿಗಣಿಸಿ, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಅಂತಾರಾಷ್ಟ್ರೀಯ ವಿಜ್ಞಾನ ಗ್ಯಾಲರಿಯೊಂದಿಗೆ ಬೆಂಗಳೂರಿನಲ್ಲಿ ವಿಜ್ಞಾನ ಗ್ಯಾಲರಿಯನ್ನು ಪಾಲುದಾರ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಮಂದಿರ (Indian Institute of Science), ರಾಷ್ಟ್ರೀಯ ಜೀವಶಾಸ್ತ್ರ ವಿಜ್ಞಾನ ಕೇಂದ್ರ (National Centre for Biological Sciences) ಮತ್ತು ಸೃಷ್ಠಿ ಕಲೆ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆ (Srishti Institute of Art, Design and Technology) ಗಳ ಸಹಯೋಗದೊಂದಿಗೆ ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿದೆ. 

ಈ ಸಂಬಂಧ, ವಿಜ್ಞಾನ ಗ್ಯಾಲರಿ ಬೆಂಗಳೂರು ಹೆಸರಿನಲ್ಲಿ ಒಂದು ಸೆಕ್ಷನ್-8 ಕಂಪನಿಯನ್ನು ಸ್ಥಾಪಿಸಲಾಗಿದ್ದು, ಇದಕ್ಕೆ ಕಿರಣ್ ಮಜುಂಮ್ದಾರ್ ಶಾ ರವರನ್ನು ಗೌರವ ಅಧ್ಯಕ್ಷರಾಗಿ ನೇಮಿಸಲಾಗಿದೆ.  ಬೆಂಗಳೂರಿನಲ್ಲಿ ವಿಜ್ಞಾನ ಗ್ಯಾಲರಿಯನ್ನು ಸ್ಥಾಪನೆಗೆ ಅನುವಾಗುವಂತೆ ಸರ್ಕಾರವು ಹೆಬ್ಬಾಳದ ಭಾರತೀಯ ಪಶುಸಂಗೋಪನಾ ಸಂಸ್ಥೆಯ ಆವರಣದಲ್ಲಿ 1 ಎಕರೆ 26 ಗುಂಟೆ ಜಾಗವನ್ನು ನೀಡಿದೆ. ಗ್ಯಾಲರಿಯ ಕಟ್ಟಡದ ವಾಸ್ತುಶಿಲ್ಪಿಯನ್ನು ಆಯ್ಕೆ ಮಾಡಲಾಗಿದ್ದು, ರೂ. 30.00 ಕೋಟಿಗಳ ವೆಚ್ಚದಲ್ಲಿ ಉದ್ದೇಶಿತ ಅಂತರಾಷ್ಟ್ರೀಯ ಮಟ್ಟದ ಕಟ್ಟಡ ಕಾಮಗಾರಿಯನ್ನು ಪ್ರಸ್ತುತ ಸಾಲಿನಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.​